ಶುಕ್ರವಾರ, ಏಪ್ರಿಲ್ 22, 2016

ಜಯಂತ್ ಕಾಯ್ಕಿಣಿ ಕತೆಗಳು - ನಾ ಕಂಡಷ್ಟು

                                      

·         ಪಂಚತಂತ್ರದಲ್ಲಿ ಬರುವ ಮಾಂತ್ರಿಕನೊಬ್ಬ ಹುಲಿಯ ದೇಹದ ಅವಶೇಷಗಳ ಎದುರು ಕೂತು ಅದಕ್ಕೆ ಜೀವ ಬರಿಸುವ ಸಂಜೀವಿನಿ ವಿದ್ಯೆ ನಡೆಸುತ್ತಾನೆ . ಜೀವ ತಳೆದಿದ್ದೆ ತಡ ಆ ಹುಲಿ ಮೊದಲು ಅವನನ್ನೇ ನುಂಗಿ ಬಿಡುತ್ತದೆ. ಕತೆಗಾರನದೂ ಅದೇ ಕತೆ. ಆಟ ಕತೆಯ ಜೀವದ ಅಸ್ಪಷ್ಟ ಸುಳಿವನ್ನಷ್ಟೇ ಇಟ್ಟುಕೊಂಡು ಅದರ ರೂಹುಗಲಿಗಾಗಿ ತಹತಹಿಸುತ್ತಾನೆ. ಅಥವಾ ರೂಹುಗಳ ಮೂಲಕ ಜೀವಕ್ಕಾಗಿ ಮಿಡಿಯುತ್ತಾನೆ. ಮೈ ತಳೆದಿದ್ದೆ ತಡ ಈ ಹುಲಿಯೂ ಮೊದಲು ಅವನನ್ನು ತಿಂದುಬಿಡುತ್ತದೆ. ನಂತರ ಕಾಡಿನ ಕತ್ತಲಲ್ಲಿ ಮೆಲ್ಲಗೆ ಅದು ನಾಡಿನೆಡೆ ಚಲಿಸುತ್ತದೆ.

·         ಹೊರ ಬಂದಷ್ಟೂ ಕತೆಯ ಹೊರೆ ಹೆಚ್ಚು. ಬಹುಷಃ ಓದುಗನ ಮನ ಸೇರಿಕೊಂಡೆ ಮತ್ತದು ಹಗುರಾಗಬಲ್ಲದು. ತನಕ ಅದರ ನಗ್ನ ಮುಜುಗರ, ಭೂಭಾರ ಅನಿವಾರ್ಯ.

·         ಕಾಯಕದ ಕೈಲಾಸ ಮುಂಬಯಿಗೆ
ಕೈಲಾಸವೇ ಕಾಯಕವಾದ ಗೋಕರ್ಣಕ್ಕೆ

·         ಕುಂಟ ಮಂಗೇಶ ತೊಡೆಯತನಕ ಕತ್ತರಿಸಲ್ಪಟ್ಟ ತನ್ನ ಮೋಟು ಕಾಲುಗಳಿಗೆ ಕಪ್ಪು ರಬ್ಬರ್ ಹಾಳೆಗಳನ್ನು ಕಟ್ಟಿಕೊಂಡು ದೇವಳದ ಹೊರಗಿನ ಭಗ್ನಮೂರ್ತಿಯಂತೆ ನಿಂತು ಕೈ ಬೀಸಿ ಬೀಸಿ ಪ್ರವಾಸಿಗರನ್ನು ಕರೆಯುತ್ತಿದ್ದ.

·         ಪ್ರತೀ ರೈಲು ಯಾವುದೋ ರಣಭೂಮಿಯಿಂದ ಕೈ ಕಾಲು ರುಂಡ ಮುಂಡಗಳನ್ನು ಹಾಕಿ ರೈಲುಗಳು ಮುಂದೆ ಹೋಗುತ್ತಿದ್ದವು.
ಅಲ್ಲಿ
ಪ್ರತೀ ಲೋಕಲ್ ರೈಲು ನಿಂತು ಹೋದಾಗಲೂ ರಾಶಿ ರಾಶಿ ಜನ ಬೀದಿ ಪಾಲಾಗುತ್ತಿದ್ದರು.

·         ಗೂಡಿಗೆ ಬೆಂಕಿಬಿದ್ದ ಇರುವೆಗಳಂತೆ ಟ್ರೇನಿನ ಒಳಗಿನ ಜನ ಹೊರಗೆ ಬಂದರು .

·         ಹೊಟ್ಟೆಗೆ ಶೇಂಗಾ ಬುಟ್ಟಿ ಕಟ್ಟಿಕೊಂಡು ಪುಟ್ಟ ಬಸುರಿಯಂತೆ ಅವರು ನಡೆಯುತ್ತಿದ್ದರು . ಓಡುವ ರೈಲಿನಿಂದ ಒಂದೂ ಶೇಂಗಾ ಬೀಳದಂತೆ  ಇಳಿಯುತ್ತಿದ್ದರು. ತಮ್ಮ ಸಪೂರ ಕೈಗಳ ಮೇಲೆ ಇಡೀ ಶಹರವನ್ನು ಗೋವರ್ಧನದಂತೆ ಎತ್ತಿ ಹಿಡಿದಿದ್ದರು.

·         ಪೇಟೆಯ ರಸ್ತೆಯಲ್ಲಿ ಎಂದಿನ ಜನ. ಎಂದಿನವೇ ಕೈಗಾಡಿ, ವಾಹನ. ಮೇಲೆ ನೋಡಿದರೆ ವಿದ್ಯುತ್ ತಂತಿಗಳ ಜತೆ ಮಾತುಬಿಟ್ಟ ಮರಗಳು.

·         ಈ ರಾತ್ರಿ ಮಾತ್ರ ಕನ್ನಡಿಗೆ ಲುಂಗಿ ಹೊದೆಸುವುದಕ್ಕೆ ಮಿಯಾ ಹಿಂಜರಿದ. ಆರುತ್ತಿರುವ ರಾತ್ರಿಯಲ್ಲಿ ಆಗಾಗ ಬೆಳಕುಗಳು ಕನ್ನಡಿಯಲ್ಲಿ ಬರುತ್ತಿದ್ದವು. ಹೊಗೆ ಕಟ್ಟಿದಂತಿದ್ದ ಗಗನದಲ್ಲಿ ಚುಕ್ಕೆಗಳ ನೆರಳೂ  ಇರಲಿಲ್ಲ. ಕಪಾಟಿನ ಹಿಂದಿನ ಕತ್ತಲು ಮಿಸುಕಾಡುತ್ತಿರುವಂತೆ ಕಂಡಿತು. ಬರಲಿರುವುದನ್ನು ಮನಗಂಡವನಂತೆ ಮಿಯಾ ಅಲ್ಲಾಡದೆ ಮರಕ್ಕೊರಗಿ ಕೂತ . ಕಪಾಟಿನ ಹಿಂದಿನ ಕತ್ತಲಿನಿಂದ ಅವಸರದಲ್ಲಿ ಬಂದುಬಿಟ್ಟಳು ಅವಳು.  ಚಾಳಿನ ಹೆಂಗಸರು ಹಾಕುವಂಥ ನೈಟಿಯನ್ನು ಹಾಕಿದ್ದಳು. ತುಂಬ ಕೆಲಸದಲ್ಲಿದ್ದವಳಂತೆ ಅದನ್ನೂ ತುಸು ಮೇಲಕ್ಕೆತ್ತಿ ಸೊಂಟಕ್ಕೆ ಕಟ್ಟಿಕೊಂಡಿದ್ದಳು . ಕಾಲಲ್ಲಿ ಕಾಲ್ಗೆಜ್ಜೆ ಸದ್ದು ಮಾಡದೆ ಮಿರುಗುತ್ತಿತ್ತು . ಅಲ್ಲಿದ್ದ ವಸ್ತುಗಳನ್ನು ಸರಿಪಡಿಸಿ ಮೂಲೆಯಲ್ಲಿ ಕೂತು ಏನನ್ನೂ ಹೋಲಿಯತೊಡಗಿದಳು . ಗಾಳಿಗೆ ಅವಳ ಕೂದಲು ಹಾರುತ್ತಿದ್ದರೂ ಅವಳು ತುರುಬು ಕಟ್ಟಿದ ರೀತಿಯಿಂದಾಗಿ ಆ ಹಾರಾಟಕ್ಕೂ ಒಂದು ಒಪ್ಪು ಇತ್ತು . ಅವಳು ಹೊಲಿಯುತ್ತ ಏನನ್ನೂ ಗುಣುಗುಣಿಸುತ್ತಿದ್ದಳು . ರಸ್ತೆಯಲ್ಲಿ ಅಪರೂಪಕ್ಕೆ ವಾಹನಗಳ ಹೆಡ್ ಲೈಟು  ಹಾದರೆ ಎರಡೂ ಕೈಗಳಿಂದ ಕಿವಿ, ಕಣ್ಣು ಮುಚ್ಚಿಕೊಳ್ಳುವಳು .ಅವಳು ತನ್ನಷ್ಟಕ್ಕೆ ಹಾಡಿಕೊಳ್ಳುತ್ತಿಲ್ಲ. ಏನನ್ನೋ ಪುಕಾರಿನಂತೆ ಗೊಣಗುತ್ತಿದ್ದಾಳೆ. ಜಂಗು ಗ್ಯಾಸ್ ಸ್ಟೋವಿನ ಮೇಲೆ  ಕುದಿಯುತ್ತಿದೆ. ಕಣ್ಮುಚ್ಚಿ ತೆಗೆಯುದರೊಳಗೆ ಘಮಘಮಿಸುವ ಊಟದ ತಾಟನ್ನು ನೀರಿನ ಲೋಟದೊಂದಿಗೆ ಮೇಜಿನ ಮೇಲಿಟ್ಟಿದ್ದಾಳೆ. ಮಿಯಾಗೆ ಸಂಕಟ ಉಕ್ಕಿತು. ಊಟ ತನಗಾಗೇ ಎಂಬುದು ಗ್ಯಾರಂಟಿ. ಆದರೆ  ಬಳಿ ಹೋದದ್ದೇ ಮತ್ತೆಲ್ಲ ಕಣ್ಮರೆಯಾದರೆ? ಆದರೆ ಶಂಕೆ ಆರುವ ಮೊದಲೇ ಆಟ ಎದ್ದಾಗಿತ್ತು . ರಸ್ತೆಯ ದೀಪಗಳ ಹಳದಿ ಬೆಳಕಿನಲ್ಲಿ ಎಲೆಗಳೂ ಹೊಂಬಣ್ಣದಿಂದಲೇ ಉದುರುತ್ತಿದ್ದವು. ಅವನ ತಾಟಿನ ಮೇಲೇ ಇನ್ನೇನು ಬಂದು ಕೂರಲಿದ್ದ ಎಳೆಯೊಂದನ್ನು ಅವಳು ನಾಜೂಕಾಗಿ ಹಿಡಿದು ತಳ್ಳಿದಳು . ಮತ್ತು ಮಿಯಾನ ಊಟ ಮುಗಿದು ಆಟ ತೇಗುವವರೆಗೂ ಫ್ರಿಜ್ಜಿಗೆ ಒಂದು ಕೈ ಊರಿ ಕ್ಯಾಲೆಂಡರಿನಂತೆ ವಿಧೇಯಳಾಗಿ ಆತು ನಿಂತಳು. ಎಷ್ಟೋ ಮೈಲಿಗಳನ್ನು ನಡೆದು ಬಂದಿದ್ದರೂ ದಣಿಯದವಳಂತೆ ಇದ್ದಳು . ಮಣಗಟ್ಟಲೆ ಹೊರೆಯನ್ನು ಈಗಷ್ಟೇ ತಲೆಯಿಂದ ಇಳಿಸಿ ಮನೆಗೆಲಸದಲ್ಲಿ ಸೇರಿಕೊಂಡಂತೆ ಇದ್ದಳು. ಅವಳ ಮುಂಗುರುಳಿಗೆ ರೊಟ್ಟಿಯ ಹಿಟ್ಟು ಇತ್ತು. ಬೆರಳಿನ ತುದಿಗೆ ಮೆಣಸಿನ ಘಾಟು . ಕಿಬ್ಬೊಟ್ಟೆಯಲ್ಲಿ ಬೆಳಗುವ ಬೆವರ ಹನಿ ಮಿಯಾನ ಉಸಿರಿಗೂ ಅಲ್ಲಾಡುವಂತಿತ್ತು. ಓಡಿ ತಲೆಯಿಟ್ಟು ತಬ್ಬಿಕೊಳ್ಳಬೇಕಿನಿಸುವ ಅವಳ ಮಡಿಲಿಗೆ ತೊಟ್ಟಿಲಿನ ಕೌದಿಯ ಮಿದು . ಚಟ್ನಿಗೆ ಖಾರ ಜಾಸ್ತಿ ಎಂದು ಮಿಯಾ ಗಟಗಟ ನೀರು ಕುಡಿದ. ಅವಳು ಸನಿಹ ಬಂದು ಲೋಟಕ್ಕೆ ನೀರು ತುಂಬಿದಳು . ಅವಳ ಕಣ್ಣುಗಳು ಕಾಣುತ್ತಿಲ್ಲ . ಅವಳ ಕುಪ್ಪಸದ ಒದ್ದೆ ಕಂಕುಳು ಗಾಳಿಯ ದಿಕ್ಕು ತಪ್ಪಿಸುತ್ತಿದೆ . ಕಣ್ಣು ಮಂಜಾದ ಮಿಯಾ 'ಖಾರ  ಖಾರ '  ಎಂದು ಕಿರುಗುಡ ತೊಡಗಿದ . ಅಪರಾಧ ಎಸಗಿದವಳಂತೆ ಅಮಾಯಕವಾಗಿ ಕಪಾಟಿನ ಹಿಂದೆ ಸರಿದಳು. ಹೆದರಿದವ ಅಲ್ಲಿಗೆ ನುಗ್ಗಿದ. ಅವಳಲ್ಲಿರಲಿಲ್ಲ. ರಸ್ತೆಗೆ ಓಡಿದ . ಬದಿಯ ಎಳನೀರಿನವನ ಖಾಲಿ ಚಿಪ್ಪುಗಳು ಹಳದಿಯಾಗಿ ಹೊಳೆಯುತ್ತಿದ್ದವು . ದೂರದಲ್ಲಿ ಕಲ್ಯಾಣ ಮಂಟಪದ ಹೊರಗಿನ ಸಿಮೆಂಟು ತೊಟ್ಟಿಯ ಬಳಿ ಕಂಡಂತಾಗಿ ಅದರ ಹಿಂದೆ ಕಣ್ಮರೆಯಾದಳು

·         ಪ್ರೀತಿ ಅಂದ್ರ ಬರೇ ಹಟಾ ಏನು ???

·         ತೇರು ಆಗತಾನೆ ನಿದ್ದೆ ತಿಳಿದಂತೆ ವಾಲುತ್ತ ಒಜ್ಜೆಯಾದ ಕನಸಿನಂತೆ ನಡೆದು ಹೋಗುತ್ತಿತ್ತು.

·         ಪ್ರಳಯಪೂರ್ವ ಶಾಂತತೆ
·         

·         ನಿಷ್ಕಾರಣ ಒಡನಾಟದ ಜಾಗವನ್ನು ಪೂರ್ವನಿಗದಿತ ಭೇಟಿಗಳು, ಭೇಟಿಯ ಜಾಗವನ್ನು ಫೋನಿನ ಸಂಭಾಷಣೆಗಳು, ವಿಳಾಸದ ಜಾಗಗಳನ್ನು ನಂಬರುಗಳು, ಮಾತುಗಳ ಜಾಗವನ್ನು ಚುಟುಕು ಚೂರು ಸಂದೇಶಗಳು ಆಕ್ರಮಿಸುತ್ತ ಜೀವನ ಅನ್ನೋದು ಫಳ ಫಳ ಹೊಳಪಿನ ಹೊದಿಕೆಯ , ರಾಶಿ ರಾಶಿ  ನಂಬರು, ವಿಸಿಟಿಂಗು ಕಾರ್ಡು ತುಂಬಿದ ಮೀಟಿಂಗಿನ ತಾರೀಖು ನಮೂದಿಸಿದ ಸುಂದರ ಪ್ಯಾಕೆಟ್ ದಿನಚರಿಯಾಯಿತು.

·         ಮಗು ಹಟದಿಂದ ಅರ್ಧಮರ್ಧ ಉಂಡು ಬಿಟ್ಟ ತಟ್ಟೆಯ ಊಟದಂತೆ ಇದೆ ಪೇಟೆ.

·         ನೈಋತ್ಯ ನಿಗೆ ರಾತ್ರಿ ಈಗಲೂ, ಇನ್ನು ಮುಂದೆಂದೋ ನಡೆಯಲಿರುವ ರಾತ್ರಿಯಂತೆ ಭಾಸವಾಗುತ್ತದೆ . ಕಪಡಾ ಸ್ಟೇಷನ್ನಿನ ಒಂದು ಮುರುಕು ಬೆಂಚಿನ ಮೇಲೆ ಕೂತು ಅವನು, ಪರೀಕ್ಷೆಯ ಮೊದಲು ನಿಯಮಗಳನ್ನು ಹೇಳುವ ಮಾಸ್ತರನಂತೆ ' ನೋಡು .. ನನ್ನದ್ಯಾವುದು ಗ್ಯಾರಂಟಿ ಇಲ್ಲ . ನನ್ನದು ಫಿಕ್ಸಡ್ ಡಿಪಾಸಿಟ್ ಬದುಕಲ್ಲ . ಮಿನಿಮಮ್ ಬ್ಯಾಲೆನ್ಸು ಇಲ್ಲದ ಚಾಲೂ ಖಾತೆಯ ಬದುಕು . ಬಾಕಿಯವರ ಹಾಗೆ ನಮ್ಮ ಸಂಸಾರ ಇರಲಿಕ್ಕಿಲ್ಲ . ... ನಿನಗೆ ಮೋಸವಾಗಬಾರದು ನೋಡು ...' ಎಂದು ಹೇಳುತ್ತಿದ್ದವನ ಮೇಲೆ ಅವಳಿಗೆ ಜೀವ ಉಕ್ಕಿ ಬಂದು ಅವನನ್ನು ಬಿಗಿದಪ್ಪಿ ಅವನ ತುಟಿಗಳಿಂದ ಅವನು ಆಡುತ್ತಿರುವ , ಆಡಲಿರುವ ಮತ್ತು ಆಡಲಾಗದ ಎಲ್ಲ ಮಾತುಗಳನ್ನೂ ಹೀರಿಕೊಂಡು ಬಿಟ್ಟಳು . ಕ್ಷಣದ ಸಾಕ್ಷಿಯಂಬಂತೆ ಕಣ್ಣು ಕುಕ್ಕುವ ಬೆಳಕಿನ ಉದ್ದ ರೈಲೊಂದು ಜೋರಾಗಿ ಕಹಳೆ ಊದುತ್ತ ತನ್ನ ಬೃಹತ್ ಲಯದ  ಸದ್ದಿನಲ್ಲಿ , ಅವರ ಮೇಲೆ ಸಾಲು ಸಾಲು ಡಬ್ಬಿಗಳ ಕಿಟಕಿ ಬೆಳಕಿನ ಅಕ್ಷತೆ ಉದುರಿಸಿ ಹಾದು ಹೋಯಿತು .

·         ಹಳಿಗಳ ಮೇಲೆ ಮದ್ಯಾಹ್ನದ ಸೂರ್ಯ ಉದ್ದಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವನಂತೆ ಮಲಗಿದ್ದ .

·         ಶಶಾಂಕನಿಗೆ ಸರೋಜಿನಿಯ ಕನಸಿನೊಳಗಿನ ಆಕಾಶದಲ್ಲಿ , ನೆಲವಿಲ್ಲದ ಅನಂತದಲ್ಲಿ ನಿಂತಂತೆ ಭಾಸವಾಯಿತು.


·         "ಮತ್ತೇ?" ಎಂದು ಸರೋಜಿನಿ ಶಶಾಂಕನನ್ನು ಕಣ್ತುಂಬಿ ನೋಡಿದಳು . ಅದಕ್ಕಾವ ಉತ್ತರವೂ ಇರಲಿಲ್ಲ . ಸುರಿಯುವ ನೀಲಿಯಲ್ಲಿ ಒದ್ದೆಯಾದ ಬಿಗಿ ಜಡೆಯ ನಡುವಿನ ಕಣ್ಣುಗಳಿಗಾಗಿ ಮಿಕಿಮಿಕಿ ನೋಡಿದ ಶಶಾಂಕನಿಗೆ ಅವು ಬೇರೆಯಾಗಿಯೇ ತೋರತೊಡಗಿದವು . ಇಲ್ಲೀಗ ಪ್ರಶ್ನೆಗಳಿಗೆ ಎಡೆಯಿರಲಿಲ್ಲ . ಅರ್ಥವೂ ಇರಲಿಲ್ಲ . ಸಮಯಕ್ಕೆ ಸಂಬಂಧವೇ ಇಲ್ಲದ ಒಳ ಜೀವಕ್ಕೆ ಮಾತ್ರ ಅನುಭವಕ್ಕೆ ಬರುವ ಎಳೆಯೊಂದು ಶಾಂತಗೊಳ್ಳುತ್ತಿತ್ತು . ಎಳೆಯನ್ನು ಹುಸಿಗೊಳಿಸುವ ಎಲ್ಲಿದ್ದೆ , ಏನಾದೆ, ಅವನಾರು, ಇವನಾರು, ಅವಳೆಲ್ಲಿ, ಇವಳೆಲ್ಲಿ, ಹೊಟ್ಟೆಪಾಡು, ಅನ್ನ , ಹಣ, ತೆರಿಗೆ, ಮನೆ, ವಂಶಾಭಿವೃದ್ಧಿ , ಯಶ, ಅಪಜಯ, ಬಚ್ಚಲು, ಕಾಯಿಲೆ, ಡಬಲ್ ಬೆಡ್ಡು , ಸ್ವಂತ ಮಕ್ಕಳು ದೇಹ - ಇಂಥ ಯಾವ ಅಪಸ್ವರಗಳೂ ಇಲ್ಲಿಗೆ ತಲುಪುವಂತಿರಲಿಲ್ಲ .

·         ನೆನಪು ಮತ್ತು ಅರಿವು ಎರಡೂ ಅಳಿಸಿಹೋದರೆ ಸರೋಜಿನಿ ಯಾರು? ಕೊನೆಗೂ ನಾವು ಸಂಬಂಧ , ಪ್ರೀತಿ ಅಂತೆಲ್ಲ ಅನ್ನೋದು ನಮ್ಮೊಳಗೆ ಉಳಿದ ಜೀವದ ನೆನಪುಗಳಿಗೋ ಅಥವಾ ಎದುರಿಗಿರುವ ಉಸಿರಾಡುವ ವ್ಯಕ್ತಿಗೋ ? – ಶಶಾಂಕ್

·         ಅಡಿಗೆ ಆಟ ಆಡುವ ಮಕ್ಕಳು ಸುಳ್ಳೇ ಸುಳ್ಳೇ ಊಟದ ಅಭಿನಯ ಮಾಡುವಂತೆ , ಪುಟ್ಟ ಪುಟ್ಟ ಸೌಟಿನಿಂದ ಬಡಿಸಿದಂತೆ - ನಾವು ಭವಿಷ್ಯದ ಬಗ್ಗೆ , ಬಾಳಿನ ಬಗ್ಗೆ ಕನಸುಗಳನ್ನು ಉಣ್ಣುತ್ತಿದ್ದೇವೆ.

·         ಶಶಾಂಕನ ಬಾಯಿಯೊಳಗೆ ಥರ್ಮಾಮೀಟರು ಇಟ್ಟು ನಾಡಿಯನ್ನು ನೋಡುತ್ತಿದ್ದ ನರ್ಸು ಆಗಷ್ಟೇ ಪ್ಯಾಕೆಟ್ಟಿನಿಂದ ಹೊರತೆಗೆದ ಬೆಳ್ಳನೆ ಸಾಬೂನಿನಂತೆ ಕಂಡಳು .

·         ರವಿವಾರದ ಮುಂಜಾವಾದ್ದರಿಂದ ಫ್ಲೋರಾ ಫೌಂಟನ್ ಪ್ರದೇಶ ನಿರ್ಜನವಾಗಿತ್ತು . ಕೆಲಸದ ದಿನದಲ್ಲಿ ವಾಹನಗಳಿಂದ , ಬೀದಿ ವ್ಯಾಪಾರಿಗಳಿಂದ ಕಿಕ್ಕಿರಿದಿರುತ್ತಿದ್ದ ಪಾರ್ಕಿಂಗ್ ಪ್ರದೇಶಗಳೆಲ್ಲ ಖಾಲಿ ಖಾಲಿಯಾಗಿದ್ದುದರಿಂದ ಎಂದಿನ ಪ್ರದೇಶವೇ ಈಗ ಹೆಚ್ಚಿಗೆ ವಿಶಾಲವಾಗಿ , ಪ್ರಕಾಶಮಯವಾಗಿ , ಹೊಚ್ಚ ಹೊಸದಾಗಿ ಕಾಣುತ್ತಿತ್ತು . ಎಂದಿನ ಸರಭರ ಸಡಗರದ ಶಹರವೇ ಈಗೊಂದು ತನ್ನದೇ ಖಾಸಗಿ ಕೌಟುಂಬಿಕ ಕ್ಷಣದಲ್ಲಿ ಬನಿಯನ್ನು ಹಾಕಿಕೊಂಡು ಕೂತಂತಿತ್ತು .

·         ರಜೆಯಲ್ಲಿದ್ದ ಮೂವತ್ತು ಮಹಡಿಗಳ ಶಿಖರ - ಒಂದು ಸ್ತಬ್ಧ ಸಾಮೂಹಿಕ ಬೃಹತ್ ಗೋರಿಯಂತೆ ನಿಂತಿತ್ತು .
ಅದರ ಮೇಲೆ ತೆರೆದು ಕೂತಿದ್ದ ದೊಡ್ಡ ಎಂಟೆನಾ ಡಿಶ್ ಗಳು ನೀಲಿಗೊಡ್ಡಿದ್ದ  ಭಿಕ್ಷಾ ಕರಟದಂತಿದ್ದವು .

·         ಅದೃಷ್ಟದ ಹೊಸ ಬಾಗಿಲುಗಳನ್ನು ತೆರೆಯುವ ಕೀಲಿ ಬೇಕು .
·
·         ಬರವಣಿಗೆ ಮೂರ್ತ ಅಮೂರ್ತ ಲೋಕಗಳಲ್ಲಿ ಭವಿಸುವ ಭಾವಿಸುವ ಏನೇನನ್ನೊ ಪಡೆಯಲು ಹವಣಿಸುವ ತೀರ ಖುದ್ದಾದ ಸ್ವಾರ್ಥಮಯ ಕಸುಬು

·         ಹಣ ಮತ್ತು ದೇಹ ನಡುವೆ ಬಾರದಂಥ ಸಖ್ಯ ಕೊಡಲು ಜಗತ್ತೇ ತಯಾರಿರುವಾಗ ಸಣ್ಣ ಸಣ್ಣ ನೋವಿನ ಗಂಟುಗಳನ್ನು ಯಾಕಪ್ಪಾ ಹಾಕಿಕೊಳ್ಳಬೇಕು .

·         ಪೇಟೆಯಲ್ಲಿ ನಡೆಯುವವರು ತಮ್ಮ ನಗುಗಳನ್ನು ಎಲ್ಲೋ ಅಡವಿಟ್ಟು ಬಂದಿದ್ದಾರೆ . ಎಲ್ಲರೂ ಹೆದರಿದ್ದಾರೆ . ಬ್ಯಾಂಕಿನಲ್ಲಿ ನಿಂತ ಪರಿಚಿತರೂ ಹೇಗೆ ಕಳ್ಳರಂತೆ ಹುಳ್ಳಗೆ ಕಾಣುತ್ತಾರೆ . ಕಿಂಡಿಯಿಂದ ಇಸಿದುಕೊಂಡ ಹಣ ಹೇಗೆ ನಾಲಿಗೆಗೆ ಬೆರಳು ಹಚ್ಚಿ ಹಚ್ಚಿ ನೋಟಿನ ರುಚಿ ನೋಡುವವರಂತೆ ಎಣಿಸುತ್ತಾರೆ . ಇದು ತಮಗೆ ಸಂಬಂಧ ಪಟ್ಟ ಹಣ ಅಲ್ಲ . ಎಲ್ಲಿ ತನ್ನ ಜಾಗಕ್ಕೆ ಮರಳಿಬಿಡಬಹುದೋ ಎಂಬಂತೆ ಗಟ್ಟಿಯಾಗಿ ಎಣಿಸಿ ತಲೆದೂಗಿ ಕಿಸೆ , ತೊಗಲಿನ ಪಾಕೀಟು ಅಂತ ಅವಚಿಕೊಂಡು ತಲೆಯ ಮೇಲೊಂದು ಸಿಮೆಂಟಿನ ಚೀಲ ಇಟ್ಟುಕೊಂಡವರಂತೆ ಹೊರಬಿದ್ದು ನಡೆಯುತ್ತಾರೆ . ತೋಲ ತಪ್ಪದಂತೆ .
ಎಲ್ಲಿ ಹಾಕಿದರೆ ಹೆಚ್ಚು ಬಡ್ಡಿ ಎಲ್ಲಿ ತೆಗೆದರೆ ಹೆಚ್ಚು ಬಡ್ಡಿ . ತಮ್ಮ ಮಕ್ಕಲಿಗಾಗಷ್ಟೇ ಜನ್ಮ ದಿನಕ್ಕೆ ಉಡುಪು ಕೊಳ್ಳುತ್ತಾರೆ . ಸಾರ್ವಜನಿಕ ಪಾರ್ಕಿನಲ್ಲಿ ಇರುವ ಒಂದೇ ಜೋಕಾಲಿಯ ಮೇಲೆ ಯಾವುದೇ ಮಗು ತುಸು ಹೆಚ್ಚು ತೂಗಿದರೂ 'ಸಾಕೀಗ ' ಎಂದು ಗದರಿಸಿ ಇಳಿಸಿ ತಮ್ಮ ಮಕ್ಕಳನ್ನು ಕೂರಿಸಿ ಅವು ಒಲ್ಲೆ ಒಲ್ಲೆ  ಎಂದು ಮರಣ ಭಯದಿಂದ ಕೂಗಿದರೂ ಕ್ರೂರವಾಗಿ ತೂಗುತ್ತಾರೆ . ಊಟದ ವೇಳೆಗೇ ನೆರೆಮನೆಯ ಮಗು ಬಂದರೆ "ನಿಮ್ಮ ಮನೆಗೆ ಹೋಗಿ ಉಂಡು ಬಾ " ಎಂದು ಹೊರ ಹಾಕಿ ಬಾಗಿಲು ಹಾಕಿ ಒಳಗೆ ವಿಜಯದ ಕಳ್ಳನಗು ನಗುತ್ತಾರೆ . ಶಾಲೆಬಿಟ್ಟು ಹೊರಬಿದ್ದ ರಾಶಿ ಮಕ್ಕಳಲ್ಲಿ ಒರಟಾಗಿ ಉಳಿದ ಮಕ್ಕಳನ್ನು ತಳ್ಳಿ ತಮ್ಮ ಮಗುವನ್ನು ಮಾತ್ರ ಹುಡುಕಿ ನಗು ಬೀರುತ್ತಾರೆ . ಕೈ ಬೀಸುತ್ತಾರೆ . ಬಸ್ಸಿನಲ್ಲಿ , ರೈಲಿನಲ್ಲಿ ಎದುರು ಕೂತ ಮಗು ಕಿಲ ಕಿಲನೆ ನಕ್ಕರೂ ನಗಲಾರದಷ್ಟು ಬಿಮ್ಮಗೆ ಬಿಗಿದುಕೊಂಡಿದ್ದಾರೆ ತೊಗಲನ್ನು ಮುಖದ ಮಾಂಸ ಮಜ್ಜೆಯ ಮೇಲೆ .

·         ದೂರದಲ್ಲಿ ಆಕಾಶದಿಂದ ಚುಕ್ಕಿಗಳು ಕದ್ದು ನೆಲಕ್ಕೆ ಬಿದ್ದಂತೆ ಶಹರವೊಂದು ಕಾಣುತ್ತಿತ್ತು .

·         ನಮ್ಮ ನೋವು ನಲಿವಿನ ಎಲ್ಲೆಗಳ ಸ್ವಿಚ್ಚು ನಮ್ಮೊಳಗೇ ಇರುವಾಗ ಹೊರಗಿನ ಭೂಗೋಲಕ್ಕಾಗಿ ಯಾಕಿಷ್ಟು ತಲೆ ಚಚ್ಚಿಕೊಳ್ಳಬೇಕು.

·         ಮನಸ್ಸಿಗಿಂತ ಮಿಗಿಲಾದ ಭದ್ರ ಬೆಚ್ಚಗಿನ ಸ್ಥಳ ಬೇರೆ ಯಾವುದಿದೆ

·         ಕುರುಡನ ನಗೆಗಿಂತ ಮಿಗಿಲಾದ ಖರೆ ನಗು ಬೇರೆ ಇರಲಿಕ್ಕಿಲ್ಲ - ಬಿಂಬದ ಅರಿವಿನ ಹಂಗಿಲ್ಲದ ಅಭಿವ್ಯಕ್ತಿ ಅದು

·         ಸೀಮೆ ಎಣ್ಣೆ ಸ್ಟೋವನ್ನು ಆಗಷ್ಟೇ ನಂದಿಸಿದಂಥ ನಿಶ್ಯಬ್ದ


·         ಎಲ್ಲೂ ಏರು ದನಿಯಿಲ್ಲದ , ಬದುಕಿನ ಎಲ್ಲಾ ಕ್ಷುದ್ರತೆಗಳ ಅರಿವಿರುವ ಮತ್ತು ಹಾಗಿದ್ದೂ ಅಂತಹ ಬದುಕನ್ನು ತುಸುವಾದರೂ ಹಸನುಗೊಳಿಸಲು ಪ್ರಯತ್ನಿಸುವ ಪ್ರೇಮಲ ಮನಸ್ಸು ಜಯಂತರ ಕತೆಗಳ ಆಳದಲ್ಲಿ ಕ್ರಿಯಾಶೀಲವಾಗಿದೆ
ಸಿ  ಎನ್  ರಾಮಚಂದ್ರನ್

·         ಮಹಾನಗರದ ಸರಳಜೀವಿಗಳಲ್ಲಿ ಉಸಿರಾಡುತ್ತಿರುವ ಸೈಲೆಂಟ್ ಹೀರೋಯಿಸಂ ಅನ್ನು ಜಯಂತರ ಕತೆ ಉತ್ಸಾಹದಿಂದ ಆಚರಿಸುತ್ತದೆ - ಎಚ್  ವೈ ಶಾರದಾಪ್ರಸಾದ್

·         ಇಷ್ಟಕ್ಕೂ ತಾನು ಹೊಳೆಯಿಸಲು ಹೊರಟ  ಅರ್ಥ ಇದು ; ಅದು ನಿಮಗೂ ಹೊಳೆಯಿತೆ ?' - ಎಂದು ಕೇಳುವ ಉದ್ಧಟತನ ಇವರ ಕತೆಯಲ್ಲಿ ಎಲ್ಲೂ ಪ್ರಕಟವಾಗಿಲ್ಲಜಯಂತರ ಕತೆಗಳಲ್ಲಿ ಅದಕ್ಕೆ ಎಡೆಯಿಲ್ಲ ಎನ್ನುವುದೇ ಅವುಗಳ ಹೆಚ್ಚುಗಾರಿಕೆ. - ಯಶವಂತ್ ಚಿತ್ತಾಲ

·         ಸಿದ್ಧ ಮಾದರಿಗಳನ್ನು ಹಿಂಬಾಲಿಸದೆ,  ವ್ಯಕ್ತಿ ವಿಶಿಷ್ಟ ಜೀವನ ವಿನ್ಯಾಸಗಳ ಮೂಲಕವೇ ಮನುಷ್ಯ ಜೀವನ ವಿನ್ಯಾಸವನ್ನೂ ಕಾಣುವ ಮಹಾತ್ವಾಕಾಂಕ್ಷೆ ಇಲ್ಲಿದೆ. - ಟಿ  ಪಿ ಅಶೋಕ್

·         ಭಾಷೆಯ ವಿಷಯದಲ್ಲಿ ಅವರು ತೀರ ವಿಶಿಷ್ಟರಾಗಿದ್ದಾರೆ . ಅವರಿಗೆ ಒಲವಿರುವುದು ರೂಪಕಗಳತ್ತ .  ರೂಪಕಗಳ ಒಂದು ಮುಖ್ಯ ಕಾರ್ಯವೆಂದರೆ ಕತೆಯನ್ನು ಅದರ ಪಾತ್ರಘಟನೆಪರಿಸರಗಳಿಂದ ಬಿಡಿಸಿ ಅದಕ್ಕೆ ಮುಕ್ತತೆಯನ್ನೊದಗಿಸುವುದು
ಜಿ ಎಸ್  ಆಮೂರ್

·          ಕಥೆಗಳಲ್ಲಿ ಬದುಕಿನ ಸೌಂದರ್ಯ ಸಾಧ್ಯತೆಗಳು ಇದ್ದಕ್ಕಿದ್ದಂತೆ  ಸಾಮಾನ್ಯ ಜೀವನದಿಂದಲೇ ಗೋಚರಿಸಿಬಿಡುತ್ತವೆ . - ಎಸ್  ಆರ್ವಿಜಯಶಂಕರ್

·         ಕಥಾಮಂಟಪದಲ್ಲಿ ಜಯಂತರು ಹಚ್ಚುವ ಸಾಲುದೀಪಗಳು ಕೇವಲ ದೃಶ್ಯಗಳಾಗದೆ ದರ್ಶನವಾಗಿಯೂ ಬೆಳಕು ಚೆಲ್ಲುತ್ತವೆ . - ಶ್ರೀಧರ್ ಬಳಿಗಾರ್


·         ಮತ್ತೆ ಮತ್ತೆ ಅರ್ಥವ್ಯಾಪ್ತಿಭಾವವ್ಯಾಪ್ತಿ  ಬೇಡುವ ಅವರ ಕಥನ ಕಲೆಯನ್ನು ಸುಮ್ಮನೆ ಅನುಭವಿಸುವುದಕ್ಕಿಂತ ಬೇರೆ ಸುಮ್ಮಾನ ಇಲ್ಲ - ವಿ ಎನ್ ವೆಂಕಟ್ ಲಕ್ಷ್ಮಿ


ಜಯಂತನ ಕಥೆಗಳು, ಕವಿತೆಗಳು, ಪ್ರಬಂಧಗಳು ನಿರಂತರವಾದ ಯಾವುದೋ ಯಾನದ ಚಿತ್ರದಂತೆ ಕಾಣುತ್ತವೆ. ಬಹುಶಃ ಅದಕ್ಕೇ, ಅವನ ಕಥೆಗಳು, ಕಥೆಗಳಿಗಿಂತ ಹೆಚ್ಚಾಗಿ ಪದಗಳ ಮೂಲಕ ಚಲಿಸುವ ಚಿತ್ರಗಳಾಗಿವೆ.
ಎಂ ಎಸ್ ಶ್ರೀರಾಮ್

·         ಮಧ್ಯಮ ವರ್ಗದ ಒಂದು ವಿಕ್ಷಿಪ್ತ ಗಳಿಗೆಯನ್ನು ಜಯಂತ ಮಕ್ಕಳು ಚಿಟ್ಟೆ ಹಿಡಿಯುವ ಹಾಗೆ ಏಕಾಗ್ರತೆಯಿಂದ ಹೊಂಚು ಹಾಕಿ ಹಿಡಿಯುತ್ತಾರೆಮತ್ತು ಎಲ್ಲ ಲವಲವಿಕೆತಾಜಾತನದಿಂದ ನಮ್ಮ ಮುಂದಿಡುತ್ತಾರೆ . (ಅವರ ಕಥೆಯಲ್ಲೇ ಬರುವ ) ಕ್ಷೌರದಂಗಡಿಯ ಹುಡುಗ ಹಿಡಿದು ತೋರಿಸುವ ಕನ್ನಡಿಯ ಹಾಗೆಒಂದರೊಳಗೊಂದು ಕನ್ನಡಿ ಸೇರಿ ಹೋಗಿ ತುಂಬ ದೂರದ ತನಕ ಅದರಲ್ಲಿ ಒಂದೇ ಮುಖ ಬೇರೆ ಬೇರೆಯಾಗಿ ಕಾಣಿಸುತ್ತಾ ಹೋಗುತ್ತದೆಮತ್ತು ಅದೇ ಕಾಲಕ್ಕೆ ಅಂತರಂಗವನ್ನೂ ತೆರೆಯುತ್ತಾ ಹೋಗುತ್ತದೆ.
– ಜೋಗಿ

·         ಮಳೆ ನಿಂತ ಮೇಲಿನ ಭೂಮಿಯಿರುತ್ತಲ್ಲ , ಅಂತ ಶುದ್ಧ ಮತ್ತು ಅನಾಥ ಸ್ಥಿತಿಯಲ್ಲಿ ನೀನು , ಮನುಷ್ಯನ ಅಳಲು ಮತ್ತು ಅರ್ಥಪೂರ್ಣತೆಗಾಗಿನ ಹಂಬಲಿಕೆಗಳನ್ನು ಅನುಭವಿಸುತ್ತಲೇ ನಮಗೆ ಕಾಣಿಸುತ್ತೀಯಭಗ್ನ ಬದುಕಿನ ಎಷ್ಟೊಂದು ಜೀವಂತ ವಿವರಗಳು ನಿನಗೆ ಗೊತ್ತುಮತ್ತು ಅವುಗಳಲ್ಲಿ  ಬದುಕು ಒಂದು ದಿವ್ಯ ಎಂದು ನೀನು ಹೊಳೆಸುತ್ತೀಯ
ಎಸ್ ಮಂಜುನಾಥ್